Wednesday, October 23, 2013

ಬದುಕೆಂಬ ಕಾವ್ಯ

ಕವನಗಳೇ ಹಾಗೆ-
ಅರ್ಥವಾದರೂ ಅರ್ಥವಾಗಲಾರವು
ಅರ್ಥವಾದಷ್ಟು ನಮ್ಮೊಲುಮೆ, ಅಷ್ಟೇ!
ಕವಿಯ ಕಲ್ಪನೆಯ ಸಾರ ದಕ್ಕಲಾರದು ಪೂರ್ತಿ
ಅದರರ್ಥ, ಬದ್ಧತೆಗಳೆಲ್ಲ ಕವಿಗಷ್ಟೇ ಸಂವೇದ್ಯ
ಬದುಕು ಕಾವ್ಯಕ್ಕಿಂತ ಭಿನ್ನವೇನಲ್ಲ;
ನಮ್ಮ ಬದುಕು ನಮ್ಮದೇ ಮಹಾಕಾವ್ಯ
ಅದರ ಸೃಷ್ಟಿ-ದೃಷ್ಟಿಯೆಲ್ಲ ನಮ್ಮದೇ!
ತುಂಬು ಶ್ರದ್ಧೆಯ ಸಾಲುಗಳು
ನೆನಪಾದಾವು ಅದಾರಿಗೋ ಒಮ್ಮೆ
ಅಷ್ಟು ಸಾಕು ಕಾವ್ಯದ ಸಾಫಲ್ಯತೆಗೆ
ಏಕೆಂದರೆ, ಕವನಗಳೇ ಹಾಗೆ-
ಎಲ್ಲ ನುಡಿಗಳೂ ಎಲ್ಲರಿಗೂ ಸಂವೇದ್ಯವಲ್ಲ
ಸಂವೇದ್ಯವಾಗಲೆಂದು ಬರೆದ ಕವನ ನಮ್ಮದಲ್ಲ!!


-ಪ್ರೀತಿಯಿಂದ
ಅಖಿಲಾ

Monday, October 21, 2013

ಬಯಕೆ

ಬೇಸರದ ಹೊತ್ತಲ್ಲಿ,
ಕಣ್ಣು ಹನಿಗೂಡಿದ ಸಮಯ,
ನನ್ನ ಕಣ್ಣೀರಲ್ಲಿ ಪ್ರತಿಫಲಿಸಿದ
ನಿನ್ನ ನಗು ಮೆಲ್ಲನಿಳಿದು
ಮತ್ತದೇ ತಿಳಿನಗು ಮೂಡಿಬರಲಿ;
ನಮ್ಮೆಲ್ಲರ ನಗು ಕಿವಿಯಲನುರಣಿಸಲಿ..



-ಪ್ರೀತಿಯಿಂದ
ಅಖಿಲಾ