Saturday, September 28, 2013

ನಿನ್ನ ನೆನಪಲ್ಲಿ..

ಆ ಸಮುದ್ರದಂಚಲ್ಲಿ ಕುಳಿತು
ದಿಗಂತದಲ್ಲಿ ಮೂಡುತ್ತಿದ್ದ
ತಾರೆಗಳನ್ನು ಕೇಳಿದ್ದೆ,
'ನನ್ನ ರಾಧೆ ಕ್ಷೇಮವೇ?'
ಬೆಳ್ಳಗೆ ನಕ್ಕುಬಿಟ್ಟಿದ್ದವಲ್ಲ -
ಇವನಿಗೆ ಭಾಮೆಯರ ಬರವೆಂದೇ?
ಯಾರಾದರೂ ನನ್ನ ಪತ್ನಿಯಾದಾರು,
ನಿನ್ನಂತೆ ನನ್ನೊಳಗಿನ ರಾಧೆಯಾದಾರೇ?
ಎಲ್ಲವೂ ಖಾಲಿಯೆನಿಸಿದಾಗ,
ಉಸಿರು ಅಲ್ಲಲ್ಲಿ ಸಿಕ್ಕಿಕೊಳ್ಳುತ್ತಿರುವಾಗ,
ಜೀವವಾಹಿನಿಯಂತೆ ಮನದಲ್ಲಿ
ಮೂಡಿ ಬರುವವಳು ನೀನೇ!
ಆಗೆಲ್ಲ ನಾನು ಯಮುನೆಯ
ತೀರದಲ್ಲಿ ನಡೆದಾಡುತ್ತೇನೆ -
ಹೀಗೆ, ಸುಮ್ಮನೆ, ಮೌನವಾಗಿ..
ನಿನ್ನ ನೆನಪುಗಳೊಡನೆ
ನನ್ನ ಎದೆಗೂಡ ಬತ್ತಿ
ಹೊತ್ತಿಕೊಳ್ಳುತ್ತದೆ, ಮೆಲ್ಲನೆ,
ಕೃಷ್ಣನ ಬೆಳಗಲೆಂದು..
ಆ ಮಂದ ಬೆಳಕಲ್ಲಿ
ಕಣ್ಣಿಗೆ ಕಾಣದಂತಿರುವ ನಿನ್ನ
ಬಿಂಬವ ಕಾಣುತ್ತೇನೆ - ಅದೇಕೋ
ಪ್ರೀತಿಯಿಂದ ಎದೆಯುಬ್ಬುತ್ತದೆ.
ರಾಧೆಯೇ ಪ್ರೀತಿಯಾದದ್ದೆಂದು?
ಯಮುನೆಯ ತಡಿಯಲ್ಲಿ,
ಮುಷ್ಟಿಯಂತರದಲ್ಲಿ ಕುಳಿತು
ಕೈಯಳತೆಗೂ ಮೀರಿ ದೂರವಿದ್ದೆವಲ್ಲ, ಆಗಲೇ?
ಪ್ರೀತಿಯ ಮಾತೊಂದನ್ನು ಬಿಟ್ಟು
ಉಳಿದೆಲ್ಲ ಹರಟಿದ್ದೆವಲ್ಲ, ಆಗಲೇ?
ನಿನ್ನ ಪ್ರೀತಿಯಿಂದಾಗಿ ನಾನು
ರಾಧಾಕೃಷ್ಣನಾದೆ, ರಾಧಾಮಾಧವನಾದೆ
ನೀ ಮಾತ್ರ ಯಾವ ಹೆಸರಿಗೂ
ಅಂಟದೇ ಮೌನಿಯಾದೆಯಲ್ಲ?
ಆಹ್! ಒಳಗೆಲ್ಲೋ 'ಚಳಕ್' ಎಂದ
ಸದ್ದು ಕೇಳಿಸಿತೇ, ರಾಧೇ?
ದೃಶ್ಯ ಮಂಜಾಗುತ್ತಿದೆ,
ಕತ್ತಲೆ ಧೃಢವಾಯ್ತೇ? ಇಲ್ಲ,
ಚಂದ್ರನಿದ್ದಾನೆ - ಆಗಸದಲ್ಲೂ,
ಕೆನ್ನೆ ಮೇಲ್ಜಾರಿದ ನೀರ ಮುತ್ತಲ್ಲೂ!


                                           
- ಪ್ರೀತಿಯಿಂದ
ಅಖಿಲಾ                                                                                                    

Tuesday, September 10, 2013

ವಾಸ್ತವ

ಬಾಪೂ, ಇಂದು ನೀನಿಲ್ಲ
ಇರುವುದೆಲ್ಲ ನಿನ್ನ ನೆನಪು
ಅಂದು ಹತನಾದರೂ,
ಇಂದಿಗೆ ನೀನೆ ಭಾಗ್ಯವಂತ!
ಮುಚ್ಚಿದ ನಿನ್ನ ಕಣ್ಣೆವೆಗಳಲ್ಲಿ
ಹಸಿರು ಭಾರತದ ಕನಸಿತ್ತು
ಬೆಳ್ಳಗಾಗಿರುವ ನಮ್ಮ ಕಣ್ಣುಗಳಲ್ಲಿ
ಬಣ್ಣವೆಲ್ಲಿಂದ ಬರಬೇಕು?
ನೀವೆಲ್ಲ ನಾಟಿ ಮಾಡಿದ
ಹಸಿರು ಬೆಳೆಯಲಿಲ್ಲ
ಪೈರು ಕಟ್ಟಲೇ ಇಲ್ಲ.
ಆದರ್ಶಗಳ ಮಳೆಯಿಲ್ಲದೆ
ಬತ್ತಿ ಹೋದವೆಷ್ಟೋ?
ಹುಲ್ಲು ಮೇಯ್ವ ಹುಲಿಗಳಿಗೆ
ಎರವಾದುವೆಷ್ಟೋ!
ಉಳಿದಿರುವುದೆಲ್ಲ ಕಮರಿದ
ಕಮಟು ವಾಸನೆಯ ದಂಟು.
ಪ್ರತಿಭೆ, ನೀತಿ, ಆದರ್ಶಗಳ ಮಂದಿ
ಜಪಾನೀ ಮಂಗಗಳಾಗಿಹರಲ್ಲ!
ಇದೆಂತಹ ವಿಕಾಸ??
ಬೋಳುಮರದ ಮೇಲೆ ಕುಳಿತು
ಹೊರದೇಶದ ಹಸಿರ ಕಾಂಬ ಹೊತ್ತು
ಧಗೆಯೆದ್ದು ಜ್ವಾಲೆಯಾಗುವುದಲ್ಲ..
ನೀನೇ ಬಂದರೂ ಬದಲಾಗುವ
ಸ್ಥಿತಿಯಿಲ್ಲ, ಜನರಿಲ್ಲ - ಪಕ್ಷಗಳಿವೆಯಷ್ಟೇ
ನೀನೇ ಹೇಳು, ಸುಧಾರಣೆಗಿದೆಯೇ
ಯಾವುದಾದರೂ ಮುಷ್ಕರದ ಮದ್ದು??


-ಪ್ರೀತಿಯಿಂದ
ಅಖಿಲಾ

Saturday, September 7, 2013

ಅಂತರ್ವಿಮರ್ಶೆ

ಪ್ರಶಾಂತವಾಗಿ ಪ್ರವಹಿಸುವ
ನದಿಯಾಳವನರಿಯೆ,
ಚೆಲ್ಲಲೇ ಬೇಕು ನಮ್ಮದೇ ನೆರಳ-
ಹರಿವ ನೀರಲ್ಲಿ!
ಕದಡದ ತಿಳಿನೀರಲ್ಲಿ
ತೂರಿಬಿಡೆ ನೇರದೃಷ್ಟಿ
ಕಂಡಾವು ಒಡಲೊಳಗಿನ ಮುತ್ತು-ರತ್ನ
ಇಲ್ಲವೆಂದರೂ ಬೇಸರವಿಲ್ಲ,
ಕಂಡೀತು ಕೆಲ ಮೀನು-ಮರಿಗಳ
ಚಿನ್ನಾಟ-ಚೆಲುವಿನಾಟ
ಮತ್ತೆ, ಮನವಂತೆ ಅಂಚಿಲ್ಲದ ಅಬ್ಧಿ
ಇರಲೇಬೇಕಲ್ಲ ಮುತ್ತು-ಹವಳ?
ಹುಡುಕಲು ಬೇಕಿಷ್ಟೆ -
ಹನಿ ಏಕಾಂತ, ತುಸು ವಿಮರ್ಶೆ
ಶೋಧನೆ ತೀವ್ರವಿರೆ
ದೊರೆಯದಿದ್ದೀತೆ ಒಂದಾದರೂ ಮುತ್ತು?
ಆ ಮುತ್ತಿನ ಪ್ರಭೆಯಲಿ
ಬೆಳೆಸೋಣ ಹಲವಾರು ಸಿಂಪಿಗಳ -
ಸಿಕ್ಕಾವು ಮತ್ತಷ್ಟು ಮುತ್ತು.
ಇಲ್ಲವೆಂದರೂ ಬೇಸರವಿಲ್ಲ,
ಕಂಡಾವು ಚೆಂದನೆಯ ಮೀನುಗಳು
ಮುತ್ತೋ? ಮೀನೋ?
ಸೌಂದರ್ಯವಿದೆಯಲ್ಲ - ಸಾಕು, ಸಾಕು!


- ಪ್ರೀತಿಯಿಂದ
ಅಖಿಲಾ 

Thursday, September 5, 2013

ಆಟ

ನಗುವಿಗೊಂದು ಮುಗುಳ್ನಗು,
ಮಾತಿಗೊಂದು ಪ್ರತಿಮಾತು,
ಇದೇ ಪ್ರೀತಿಯೆಂದನಾತ
ಅವನೆಂದಮೇಲೆ ಇರಬೇಕು - ಎಂದುಕೊಂಡಳಾಕೆ
ಅವನ ಬಿಂಬ ಅವಳ ಕಣ್ಣಲ್ಲಿ ಭದ್ರವಾಯ್ತು
ಆತ ಅವಳ ಕಣ್ಣನೆಂದೂ ನೋಡಲಿಲ್ಲ
ಬರೇ ಮಾತನಾಡಿ ಮುಂದೆ ಸಾಗಿದ
ಅವಳು ತಡೆಯಲಿಲ್ಲ-
ಕಣ್ಣು ಮುಚ್ಚದೆ ದಿಟ್ಟಿಸಿದಳವನ,
ತಿರುಗಿ ನಿಂತು, ನಾ ನಿನ್ನವನೆಂದರೆ?!
ಅವ ತಿರುಗಲಿಲ್ಲ
ಆತ ಮುಂದಿಟ್ಟ ಪ್ರತಿ ಹೆಜ್ಜೆಗೂ
ಅವಳ ಕಣ್ಣನೀರು ಧರೆ ಚುಂಬಿಸುತ್ತಿತ್ತು..
ಋತುಗಳುರುಳಿದಮೇಲೆ ಮರಳಿದನಾತ
ಅವಳು ಕದಲಲಿಲ್ಲ, ಕನಲಲಿಲ್ಲ
ಪ್ರೀತಿಯೆಲ್ಲ ಎಲ್ಲಿ? - ಎಂದ
ಮಣ್ಣಲ್ಲಿ ಇರಬೇಕು - ಎಂದಳಾಕೆ


-ಪ್ರೀತಿಯಿಂದ
ಅಖಿಲಾ

Wednesday, September 4, 2013

A Minute..

A strong wind
Sways the tree
Ripen fruits fall then..
Before the minute dies,
A mild breeze
Kisses the tree
Ripen fruits fall then..!!

Every minute
Is so vivid
With singing life
I wonder, as thought deepens
Every minute is
Replete with
The growth and the fall!!

A life is valued
If a minute is valued,
Life is a mesh of minutes, after all..
Richer the minute, richest is the life
A sweet success
And a fake failure
Make a minute richer, after all..

A failure strikes me
A minute pushes me through it
I grow a little then..
I toil for those minutes
Which honour me
With success and spirit
I grow a little more then..


-With Love
Akhila

ಮುದರಂಗು

ನಾಗಪಂಚಮಿಯಂದು
ಹಳೆಯ ನೆರಳೊಂದು ಹಾದು ಹೋಯ್ತು
ಆ ನೆರಳೆ ಬೆಳಕ ಸೆಲೆಯಾಗಿ,
ಕೈಗೆ ಮದರಂಗಿಯೇರಿತ್ತು..
ಅದಾವ ನಂಬಿಕೆಗಲ್ಲ;
ಬಾಲ್ಯದಲ್ಲೆಲ್ಲೋ ಬಿಟ್ಟ
ಸಂಭ್ರಮದ ಭ್ರಮೆಗಾಗಿ!
ರಂಗು ಹಚ್ಚುವ ಹೊತ್ತು,
ಅಲ್ಲಲ್ಲಿ ಕೊಳೆಯಾಗಿ
ಉಳಿದೆಲ್ಲ ಖಾಲಿಯಾಗಿರುವ
ಮನಸಿಗೂ ಬಣ್ಣವೇರಿಸುವ
ಕನಸಿತ್ತು, ಸುಳ್ಳಲ್ಲ!
ಆಸೆ ಹುಸಿಯಾಗಲಿಲ್ಲ,
ಮದರಂಗಿಯ ತಂಪು
ನೀಡಿತ್ತು ಅಕ್ಕಂದಿರ ಹುರುಪು
ಅವರೊಲವ ನೆನಪು,
ಒಳಗೆಲ್ಲ ಒಸರುವ ಆರ್ದ್ರತೆ
ಅಷ್ಟೇ ಸಾಕು ಈಗ-
ಮದರಂಗಿ ಗಿಡ ನೆಡಲು
ಮತ್ತೆ, ಕೈಗೇರಿದ ಕೆಂಬಣ್ಣ
ಹೊಂಬಣ್ಣ ಸಾಕಲ್ಲ-
ನೀರೆರೆಯಲು ಎಳೆಗಿಡಕೆ,
ಬಣ್ಣ ಹಚ್ಚಲು ಮನಸಿಗೆ!?

-ಪ್ರೀತಿಯಿಂದ, ಅಖಿಲಾ