Saturday, September 7, 2013

ಅಂತರ್ವಿಮರ್ಶೆ

ಪ್ರಶಾಂತವಾಗಿ ಪ್ರವಹಿಸುವ
ನದಿಯಾಳವನರಿಯೆ,
ಚೆಲ್ಲಲೇ ಬೇಕು ನಮ್ಮದೇ ನೆರಳ-
ಹರಿವ ನೀರಲ್ಲಿ!
ಕದಡದ ತಿಳಿನೀರಲ್ಲಿ
ತೂರಿಬಿಡೆ ನೇರದೃಷ್ಟಿ
ಕಂಡಾವು ಒಡಲೊಳಗಿನ ಮುತ್ತು-ರತ್ನ
ಇಲ್ಲವೆಂದರೂ ಬೇಸರವಿಲ್ಲ,
ಕಂಡೀತು ಕೆಲ ಮೀನು-ಮರಿಗಳ
ಚಿನ್ನಾಟ-ಚೆಲುವಿನಾಟ
ಮತ್ತೆ, ಮನವಂತೆ ಅಂಚಿಲ್ಲದ ಅಬ್ಧಿ
ಇರಲೇಬೇಕಲ್ಲ ಮುತ್ತು-ಹವಳ?
ಹುಡುಕಲು ಬೇಕಿಷ್ಟೆ -
ಹನಿ ಏಕಾಂತ, ತುಸು ವಿಮರ್ಶೆ
ಶೋಧನೆ ತೀವ್ರವಿರೆ
ದೊರೆಯದಿದ್ದೀತೆ ಒಂದಾದರೂ ಮುತ್ತು?
ಆ ಮುತ್ತಿನ ಪ್ರಭೆಯಲಿ
ಬೆಳೆಸೋಣ ಹಲವಾರು ಸಿಂಪಿಗಳ -
ಸಿಕ್ಕಾವು ಮತ್ತಷ್ಟು ಮುತ್ತು.
ಇಲ್ಲವೆಂದರೂ ಬೇಸರವಿಲ್ಲ,
ಕಂಡಾವು ಚೆಂದನೆಯ ಮೀನುಗಳು
ಮುತ್ತೋ? ಮೀನೋ?
ಸೌಂದರ್ಯವಿದೆಯಲ್ಲ - ಸಾಕು, ಸಾಕು!


- ಪ್ರೀತಿಯಿಂದ
ಅಖಿಲಾ 

No comments:

Post a Comment